ಎಸ್.ಎಮ್.ಎಸ್.ಪಿ. ಸಂಸ್ಕೃತ ಕಾಲೇಜಿನ 122ನೇ ವರ್ಧಂತ್ಯುತ್ಸವ ಮತ್ತು ಸಂಸ್ಕೃತೋತ್ಸವ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಬೆಂಗಳೂರಿನ ಚಾಣಕ್ಯವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಿನಯಚಂದ್ರ ಬನವತಿ ಅವರು ಮಾತನಾಡುತ್ತಾ 'ಯಾವುದೇ ವಿದ್ಯೆಯನ್ನು ಅಧ್ಯಯನ ಮಾಡುವುದಾದರೂ ಅದರಲ್ಲಿ ಶೇಕಡಾ ಐದರಷ್ಟು ಭಾರತೀಯಜ್ಞಾನಪರಂಪರೆಗೆ ಸಂಬಂಧಿಸಿದ ವಿಚಾರವನ್ನು ಕಲಿಸುವ ಅವಕಾಶ ಇರಬೇಕು. ಅನಾರೋಗ್ಯವೇ ಮೊದಲಾದ ಜಗತ್ತಿನ ಜ್ವಲಂತ ಸಮಸ್ಯೆಗಳಿಗೆ ಭಾರತೀಯಜ್ಞಾನಪರಂಪರೆಯಲ್ಲಿ ಏನು ಉತ್ತರ ಸಿಗಬಹುದೆಂದು ಕಂಡುಹುಡುಕಬೇಕು" ಎಂದರು.
ಕೃಷ್ಣಾಪುರಮಠದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು 'ಇಹಲೋಕ ಮತ್ತು ಪರಲೋಕ ಎರಡಕ್ಕೂ ಸಂಬಂಧಿಸಿದ ಪ್ರಯೋಜನ ಸಂಸ್ಕೃತಭಾಷೆಯಿಂದ ಸಿಗುತ್ತದೆ. ವೇದಾಂತವಿದ್ಯೆಯ ಅಧ್ಯಯನ ಹೆಚ್ಚು ಹೆಚ್ಚು ನಡೆಯಬೇಕು' ಎಂದು ಅನುಗ್ರಹಸಂದೇಶವನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪರ್ಯಾಯ ಶೀರೂರುಮಠದ ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರು 'ಸಂಸ್ಕೃತದ ಅಧ್ಯಯನ ನಮ್ಮ ಆದ್ಯ ಕರ್ತವ್ಯ. ಕೇವಲ ಪ್ರಮಾಣಪತ್ರವನ್ನು ಪಡೆಯುವ ದೃಷ್ಟಿಯಿಂದ ಅಧ್ಯಯನ ಮಾಡಬಾರದು. ಕಲಿತ ವಿದ್ಯೆಯನ್ನು ಇನ್ನಷ್ಟು ಜನರಿಗೆ ಹಂಚಬೇಕು. ಇದೂ ದೇವರಿಗೆ ಮಾಡುವ ಸೇವೆ' ಎಂದು ಹಿತವನ್ನು ಬೋಧಿಸಿದರು.
ಎಸ್.ಎಮ್.ಎಸ್.ಪಿ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯೆಯಾಗಿ ಸೇವೆಸಲ್ಲಿಸಿ ನಿವೃತ್ತರಾಗುತ್ತಿರುವ ಶ್ರೀಮತಿ ಪುಷ್ಪಲತಾ ಎಮ್ ಅವರನ್ನು ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ. ಪದವಿಯನ್ನು ಪಡೆದ ಕಾಲೇಜಿನ ಉಪನ್ಯಾಸಕರಾದ ಡಾ. ಅಜಿತ ಕುಮಾರ ಆಚಾರ್ಯ ಪಿ ಇವರನ್ನು ಸಮ್ಮಾನಿಸಲಾಯಿತು. ಜೊತೆಗೆ ಹಿಂದಿನ ಶೈಕ್ಷಣಿಕವರ್ಷದಲ್ಲಿ ಆಚಾರ್ಯ ತರಗತಿಯ ಅಧ್ಯಯನವನ್ನು ಮುಗಿಸಿದ ವಿದ್ಯಾರ್ಥಿಗಳಿಗೆ ವಿದ್ವತ್ ಶಾಲನ್ನು ನೀಡಿ ಅನುಗ್ರಹಿಸಲಾಯಿತು. ವೇದಿಕೆಯಲ್ಲಿ ಎಸ್.ಎಮ್.ಎಸ್. ಪಿ. ಸಭೆಯ ಕಾರ್ಯದರ್ಶಿ ವಿದ್ವಾನ್ ಗೋಪಾಲಕೃಷ್ಣ ಜೋಯಿಸ್, ಕೋಶಾಧಿಕಾರಿ ಶ್ರೀ ಚಂದ್ರಶೇಖರ ಆಚಾರ್ಯ ಉಪಸ್ಥಿತರಿದ್ದರು. ಪ್ರಾಚಾರ್ಯರಾದ ಪ್ರೊ. ಡಿ. ಎಸ್. ಅಮೃತೇಶ ಆಚಾರ್ಯರು ಸ್ವಾಗತವನ್ನು ಹೇಳಿದರು ಹಾಗೂ ಪ್ರೊ. ಸತ್ಯನಾರಾಯಣ ವಿ. ರಾವ್ ಅವರು ಧನ್ಯವಾದವನ್ನು ಸಮರ್ಪಿಸಿದರು. ಡಾ. ಮಹೇಶ ಭಟ್ಟ ಆರ್. ಹಾರ್ಯಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿಗಳಾದ ಪ್ರಹ್ಲಾದ, ಸೀತಾರಾಮ ಬನ್ನಿಂತಾಯ, ನಿತಿನ್, ಆದಿತ್ಯಕೃಷ್ಣ, ಪ್ರಹ್ಲಾದಮೂರ್ತಿ ವೇದಘೋಷವನ್ನು ಮಾಡಿದರು.
ಈ ಸಮಾರಂಭದ ಮೊದಲು ಕಾಲೇಜಿನ ವಿದ್ಯಾರ್ಥಿಗಳು 'ಸಂಸ್ಕೃತಗೀತಲಹರೀ' ಕಾರ್ಯಕ್ರಮವನ್ನು ಮತ್ತು ಬಳಿಕ ಪ್ರಸಿದ್ಧ ವಿದ್ವಾಂಸರು 'ಸುಧನ್ವಾರ್ಜುನೀಯಮ್' ಎಂಬ ಸಂಸ್ಕೃತ ತಾಳಮದ್ದಳೆ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು. ಮುಮ್ಮೇಳದಲ್ಲಿ ವಿದ್ವಾನ್ ಉಮಾಕಾಂತ ಭಟ್, ವಿದ್ವಾನ್ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ಪ್ರೊ. ರಾಮಕೃಷ್ಣ ಪೆಜತ್ತಾಯ ಬಾಳ ಅರ್ಥಧಾರಿಗಳಾಗಿದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಪ್ರಸನ್ನ ಭಟ್ ಬಾಳ್ಕಲ್, ಮದ್ದಳೆಯಲ್ಲಿ ಎನ್. ಜಿ. ಹೆಗಡೆ ಯಲ್ಲಾಪುರ, ಚಂಡೆಯಲ್ಲಿ ಶಿವಾನಂದ ಕೋಟ ಕಾರ್ಯಕ್ರಮವನ್ನು ಕಳೆಗಟ್ಟಿಸಿದರು.
