Header Ads Widget

ಶ್ರೀರಾಘವೇಂದ್ರತೀರ್ಥ ಗುರು ಸಾರ್ವಭೌಮರ ಆರಾಧನಾ ಮಹೋತ್ಸವದ ಪರ್ವಕಾಲ~ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,  ಆನೇಕಲ್.

 


ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ|
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ||

ವಿಶ್ವವಂದ್ಯರು, ಜಗನ್ಮಾನ್ಯರೂ ಆದ ಶ್ರೀರಾಘವೇಂದ್ರ ಗುರು ಸಾರ್ವಭೌಮರು 353 ವರ್ಷಗಳ ಹಿಂದೆ ಸಶರೀರರಾಗಿ ಬಂದಾವನದಲ್ಲಿ ಕುಳಿತರು. ಶ್ರೀಮುಖ್ಯಪ್ರಾಣ ದೇವರ ಅಂತರ್ಯಾಮಿಯಾದ ಶ್ರೀಮೂಲರಾಮದೇವರ ಅನುಗ್ರಹದಿಂದ ಅಂದಿನಿಂದ ಇಂದಿನವರೆಗೆ ಜಗತ್ತಿನ ಕೋಟ್ಯಂತರ ಭಕ್ತರನ್ನು ಸಲಹುತ್ತಿದ್ದಾರೆ. ಇಂತಹ ಮಹಾನುಭಾವರ ಆರಾಧನೆ, ಅವರ ಅಸಂಖ್ಯ ಭಕ್ತರಿಗೆ ಶ್ರದ್ಧಾ ಭಕ್ತಿಯ ಉನ್ಮಾದದ ಮಹೀತ್ಸವವೇ ಹೌದು.

ಈ ಮೂರು ದಿನಗಳು, ಲೋಕದ ಸಹಸ್ರಾರು ಮಂದಿ "ಅನಾಥರಿಗೆ" ನಾಥ" ರಾಗಿರುವ ಮಂತ್ರಾಲಯ ಪ್ರಭುಗಳಾದ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾರಾಧನೆ ಯ ವಿಶೇಷ ದಿನಗಳು.

ಕಲಿಯುಗದಲ್ಲಿ ಸಾಮಾನ್ಯ ಮಾನವರಾದ ನಮ್ಮ ದೃಷ್ಟಿಗೆ ಕಾಮಧೇನು , ಕಲ್ಪವೃಕ್ಷ ಗೋಚರಿಸುವುದಿಲ್ಲ. ಆದರೆ ಅವುಗಳ ಸಾದೃಶ ರೂಪವಾಗಿ ಗೋಚರಿಸುವವರೇ ನಮ್ಮ ರಾಯರು , ಇಂತಹ ರಾಯರು ಕೋಟ್ಯಂತರ ಭಕ್ತರನ್ನು ಉದ್ಧರಿಸಿದ್ದಾರೆ, ಈಗಲೂ ಉದ್ಧರಿಸುತ್ತಿದ್ದಾರೆ.

ಅನಾಥರಿಗೆ ನಾಥ ರಾಗಿ, ನಿರ್ಗತಿಕರಿಗೆ ಬೆನ್ನೆಲುಬಾಗಿ , ದೀನ ದುರ್ಬಲರಿಗೆ ಧಣಿ ಯಾಗಿ, ನಂಬಿದವರನ್ನು ಸಲಹುತ್ತಿರುವ ಮಹಾ ಗುರುಗಳು ಇವರು.

ಶ್ರೀಹಂಸನಾಮಕ ಪರಮಾತ್ಮನಿಂದ ಆರಂಭಗೊಂಡ ಪರಂಪರೆಯಲ್ಲಿ ಶ್ರೀವೇದವ್ಯಾಸರು ಶ್ರೀಮದಾನಂದ ತೀರ್ಥ (ಶ್ರೀಮಧ್ವಾಚಾರ್ಯ)ರೆಂಬ ಬೀಜ ನೆಟ್ಟರು, ಅದು ಮೊಳಕೆಯೊಡೆದು ಜಯಮುನಿ(ಶ್ರೀಮದ್ಜಯತೀರ್ಥರು)ಎಂಬ ಮರವಾಯಿತು. ಈ ವೃಕ್ಷದಲ್ಲಿ ಶ್ರೀವ್ಯಾಸತೀರ್ಥ ಮುನಿಗಳೆಂಬ ರೆಂಬೆ ಕೊಂಬೆ ಬೆಳೆದು, ಶ್ರೀವಿಜಯೀಂದ್ರರೆಂಬ ಪುಷ್ಪಗಳಿಂದ ಶೋಭಿಸಿ, ಶ್ರೀಮದ್ರಾಘವೇಂದ್ರತೀರ್ಥರೆಂಬ ಫಲ ನೀಡಿತು ಎಂದು ಶ್ರೀವಾದೀಂದ್ರತೀರ್ಥರು 'ಗುರುಗುಣಸ್ತವನ'ದಲ್ಲಿ ಹಾಡಿ ಹೊಗಳಿದ್ದಾರೆ.

ಅಂದರೆ ಶ್ರೀರಾಘವೇಂದ್ರತೀರ್ಥರಲ್ಲಿ ಶ್ರೀಹರಿಯ ಜತೆ ವಾಯುದೇವರು ನಿತ್ಯ ಆವೇಶಯುಕ್ತರಾಗಿದ್ದಾರೆ. ಇಂತಹ ರಾಯರಲ್ಲಿ ಶ್ರೀಮದಾನಂದತೀರ್ಥ(ಜಗದ್ಗುರು ಶ್ರೀಮಧ್ವಾಚಾರ್ಯರು)ರಾದಿಯಾಗಿ ರಾಯರವರೆಗಿನ ಎಲ್ಲ ಪೂರ್ವೀಕ ಗುರುಗಳು ಸನ್ನಿಹಿತರಾಗಿದ್ದಾರೆ. ಅಯೋಧ್ಯಾಪತಿ ರಘುಕುಲದ ಒಡೆಯ ಶ್ರೀರಾಮಚಂದ್ರದೇವರ ಶ್ರೀರಾಘವೇಂದ್ರ ಎಂಬ ನಾಮದಿಂದ ಕಂಗೊಳಿಸುವ ರಾಯರನ್ನು ಸ್ಮರಿಸಿದರೆ ಸಾಕು, ಮಾನವನಿಗೆ ಅಧಿಕ ಫಲ ದೊರೆಯುತ್ತದೆ. ಅಂತಹ ಮಹಾನುಭಾವರು ರಾಯರು. ದೇಶ, ವಿದೇಶದಲ್ಲಿರುವ ಮಾಧ್ವ ಮಠಗಳಲ್ಲಿ ರಾಯರ ವೃಂದಾವನವಿಲ್ಲದೆ ಮಠವೇ ಇಲ್ಲ.

ಇಡೀ ಜಗತ್ತಿನಲ್ಲಿ ವರ್ಧಂತಿ(ಹುಟ್ಟುಹಬ್ಬ) ಹಾಗೂ ಆರಾಧನೆಯನ್ನು ಸಪ್ತರಾತ್ರೋತ್ಸವ ದ ಹೆಸರಿನಲ್ಲಿ ಏಳು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಜಾತಿ, ಮತ ಭೇದವಿಲ್ಲದೆ ಆಚರಿಸುವುದೆಂದರೆ ರಾಯರ ಉತ್ಸವ ಮಾತ್ರ. ಬೇರೆ ಯಾವುದೇ ಧರ್ಮ, ಮತ, ಪರಂಪರೆಯಲ್ಲಿ ಇಂತಹ ವಿಶೇಷ ಕಾಣಲು ಸಾಧ್ಯವಿಲ್ಲ. ಇಂತಹ ಯತಿ ಗಳನ್ನು ಕಾಣಲೂ ಸಾಧ್ಯವಿಲ್ಲ. ಅಂತಹ ಮಹಿಮಾತೀತರು ರಾಯರು.

ಮನುಷ್ಯ ಮಾತ್ರರಾದ ನಾವು ಹೇಳಲು ಸಾಧ್ಯವಿಲ್ಲದಷ್ಟು ಪವಾಡಗಳನ್ನು ರಾಯರು ನಡೆಸಿದ್ದಾರೆ. ದೇಶಿಯ ಭಾಷೆಯನ್ನು ಮಾತ್ರ ಅರಿತಿದ್ದ ಗುರುಗಳು, ವೃಂದಾವನವಾದ ಅನೇಕ ವರ್ಷಗಳ ನಂತರ 1800ರಲ್ಲಿ ಅಲ್ಲಿಗೆ ಬಂದ ಬ್ರಿಟೀಷ್ ಅಧಿಕಾರಿ ಸರ್.ಥಾಮಸ್ ಮುನ್ರೋ ಜತೆ ಅವರದೇ ಭಾಷೆಯಲ್ಲಿ ವೃಂದಾವನದೊಳಗಿಂದಲೇ ಸಂಭಾಷಣೆ ನಡೆಸಿದ್ದರಲ್ಲದೇ, ದರ್ಶನ ನೀಡಿ ಮಂತ್ರಾಕ್ಷತೆ ಅನುಗ್ರಹಿಸಿದ್ದರು.

ವಿಸ್ಮಯಗೊಂಡ ಅಧಿಕಾರಿ ರಾಯರ ಪವಾಡವನ್ನು ಹೊಗಳಿ, ಈ ವಿಷಯವನ್ನು ಬರೆದಿರುವ ದಾಖಲೆಯನ್ನು ಮದ್ರಾಸು ಗೆಜೆಟಿಯರ್ ನಲ್ಲಿ ಇಂದಿಗೂ ನೋಡಬಹುದು. ದಡ್ಡ ವೆಂಕಣ್ಣನಿಗೆ ಪೂರ್ಣಪ್ರಮಾಣದ ಅಕ್ಷರ ಜ್ಞಾನ ನೀಡಿ ದಿವಾನರಾಗಿಸಿದ್ದು ಸಣ್ಣ ಸಾಧನೆಯೇನಲ್ಲ. ರಾಯರು ನಡೆದಾಡುತ್ತಿದ್ದಾಗಲೂ, ವೃಂದಾವನದಲ್ಲಿ ಕುಳಿತು ನರಹರಿಯನ್ನು ಜಪಿಸುವಾಗಲೂ ಸಾಕಷ್ಟು ಮಂದಿ ಪಾಮರರನ್ನು ಉದ್ಧಾರಗೊಳಿಸಿದ್ದಾರೆ. ಈಗಲೂ ಶ್ರೀಹರಿಯ ಸ್ಮರಣೆಯ ಜತೆ ಅವರ ಭಕ್ತರನ್ನು ನಿರಂತರ ಕಾಯುತ್ತಿದ್ದಾರೆ.

ನೊಂದವರ ನೋವಿಗೆ ಮರಳುಗಾಡಿನಲ್ಲಿ ಮಂದಾನಿಲ(ತಂಗಾಳಿ) ಬೀಸುವಂತೆ ಅಗೋಚರ ರೂಪದಲ್ಲಿ ಸಾಂತ್ವನ ನೀಡಿ, ಸಾಂಗತ್ಯದೊಂದಿಗೆ ಕಾಯುತ್ತಿದ್ದಾರೆ ಗುರುಗಳು.

ಸಾಧ್ವಿ ಗೋಪಿಕಾಂಬಾದೇವಿ ಹಾಗೂ ಶ್ರೀವೀಣಾ ತಿಮ್ಮಣ್ಣಭಟ್ಟರ ಸುಪುತ್ರ ಶ್ರೀವೆಂಕಟನಾಥಾಚಾರ್ಯರಾಗಿ ಕ್ರಿ.ಶ 1595ರಲ್ಲಿ ಹಿಂದೂ ಪಂಚಾಂಗದ ಪ್ರಕಾರ ಶ್ರೀ ಶಾಲಿವಾಹನ ಶಕೆ 1518ನೇ ಶ್ರೀಮನ್ಮಥನಾಮ ಸಂವತ್ಸರ, ಶುದ್ಧ ಸಪ್ತಮಿ, ಗುರುವಾರ, ಮೃಗಶಿರಾ ನಕ್ಷತ್ರದಲ್ಲಿ ಭುವಿಯಲ್ಲಿ ಅವತರಿಸಿದರು.

ತಂದೆ ಶ್ರೀತಿಮ್ಮಣ್ಣಭಟ್ಟರು ಹಾಗೂ ಭಾವ ಶ್ರೀಲಕ್ಷ್ಮೀ ನರಸಿಂಹಾಚಾರ್ಯರಲ್ಲಿ ಕೆಲಕಾಲ ವಿದ್ಯಾಭ್ಯಾಸ ನಡೆಸಿ, ನಂತರ ದ್ವೈತ ವಿದ್ಯಾ ಸಾಮ್ರಾಜ್ಯಾಧಿಪತಿಗಳಾದ ಶ್ರೀವಿಜಯೀ೦ದ್ರತೀರ್ಥರು ಹಾಗೂ ಶ್ರೀಸುಧೀಂದ್ರತೀರ್ಥರಲ್ಲಿ ವಿದ್ಯಾಭ್ಯಾಸ ಮಾಡಿದರು. ಸಾಧ್ವಿ ಸರಸ್ವತಿಬಾಯಿಯನ್ನು ವಿವಾಹವಾಗಿ ಶ್ರೀಲಕ್ಷ್ಮೀನಾರಾಯಣಾಚಾರ್ಯರೆಂಬ ಸುಪುತ್ರರನ್ನು ಪಡೆದರು.

ಒಂದು ದಿನ ವಾಗ್ದೇವಿಯ ಅಣತಿಯಂತೆ ಕ್ರಿ.ಶ 1621ರಂದು ಶ್ರೀಶಾಲಿವಾಹನ ಶಕೆ 1542ನೇ ಶ್ರೀದುರ್ಮತಿ ನಾಮ ಸಂವತ್ಸರದ ಫಾಲ್ಗುಣ ಶುಕ್ಲ ಬಿದಿಗೆಯಂದುಶ್ರೀಸುಧೀಂದ್ರತೀರ್ಥರಿಂದ ಸನ್ಯಾಸಾಶ್ರಮ ಸ್ವೀಕರಿಸಿ ಶ್ರೀರಾಘವೇಂದ್ರತೀರ್ಥರೆಂಬ ಅಭಿದಾನ ಪಡೆದು ವೇದಾಂತ ಸಾಮ್ರಾಜ್ಯ ಸಿಂಹಾಸನವೇರಿದರು.

ಆಶ್ರಮವನ್ನಿತ್ತ ಶ್ರೀಸುಧೀಂದ್ರತೀರ್ಥರು ನವವೃಂದಾವನದಲ್ಲಿ ವೃಂದಾವನಸ್ಥರಾದ ಮೇಲೆ ಕ್ರಿ.ಶ 1623ರಂದು ವೇದಾಂತ ಸಾಮ್ರಾಜ್ಯಾಧಿಕಾರ ವಹಿಸಿಕೊಂಡರು.50 ವರ್ಷಗಳ ಕಾಲ ವೇದಾಂತ ಸಾಮ್ರಾಜ್ಯವನ್ನಾಳಿ, ಹಲವಾರು ಪವಾಡಗಳನ್ನು ನಡೆಸಿ, ಕ್ರಿ.ಶ 1671ರ ಶ್ರೀವಿರೋಧಿಕೃತ್ ನಾಮ ಸಂವತ್ಸರದ ಶ್ರಾವಣ ಬಹುಳ ಬಿದಿಗೆಯಂದು ತುಂಗಾನದಿ ತೀರದಲ್ಲಿರುವ ಮಂಚಾಲೆ ಗ್ರಾಮದಲ್ಲಿ ಶ್ರೀರಾಮದೇವರು ಲಂಕಾಪಟ್ಟಣಕ್ಕೆ ತೆರಳುವ ಸಮಯದಲ್ಲಿ ಕೆಲಕಾಲ ಕುಳಿತು ವಿಶ್ರಮಿಸಿದ್ದ ಬಂಡೆಯಿಂದ ಸಿದ್ಧಪಡಿಸಿದ ವೃಂದಾವನದಲ್ಲಿ ರಾಯರು ಸಶರೀರವಾಗಿ ಪ್ರವೇಶ ಮಾಡಿದರು.

ಪರಮ ಪವಿತ್ರವಾದ ಮಂತ್ರಾಲಯ ಕ್ಷೇತ್ರದಲ್ಲಿ ನೆಲೆನಿಂತ ಗುರುಗಳು, ಇಂದಿಗೂ ವೃಂದಾವನದೊಳಗಿಂದ ನಂಬಿದ ಭಕ್ತರ ಬೆನ್ನು ಕಾಯುತ್ತಿದ್ದಾರೆ. ರಾಯರು ವೃಂದಾವನದಲ್ಲಿ ಕುಳಿತ ದಿನವನ್ನು ಆರಾಧನೆ ಎಂಬ ಹೆಸರಲ್ಲಿ ಆಚರಿಸಲಾಗುತ್ತದೆ.

ರಾಯರಿಗೆ ಇಷ್ಟು ಬಲ ಬರಲು ಕಾರಣ ಅವರು ಧರಿಸಿದ ಅವತಾರಗಳು.` ಶಂಕುಕರ್ಣಾಖ್ಯದೇವಸ್ತು ಬ್ರಹ್ಮ ಶಾಪಾಶ್ಚ ಭೂತಲೇ| ಪ್ರಹ್ಲಾದ ಇತಿ ವಿಖ್ಯಾತಃ ಭೂಭಾರಕ್ಷಪಣೇರತಃ | ಕಲೌ ಯುಗೇ ರಾಮಸೇವಾಂ ಕುರ್ವನ್ಮಂತ್ರಾಲಯೇ ಭವೇತ್ | ಸ ಏವ ರಾಘವೇಂದ್ರಾಖ್ಯೋ ಯತಿರೂಪೇಣ ಸರ್ವದಾ||

ಶಂಖುಕರ್ಣನೆಂಬ ದೇವತೆ ಶ್ರೀಹರಿಯ ಸಂಕಲ್ಪದಂತೆ ಬ್ರಹ್ಮದೇವರಿಂದ ಶಾಪರೂಪದ ವರವನ್ನು ಪಡೆಯುತ್ತಾನೆ. ಈ ದೇವತೆ ಕೃತಯುಗದಲ್ಲಿ ಪ್ರಹ್ಲಾದನಾಗಿ ಅವತರಿಸಿ, ಶ್ರೀನೃಸಿಂಹ ದೇವರನ್ನು ನುತಿಸಿ ಅನುಗ್ರಹಿತನಾಗುತ್ತಾನೆ. ಈ ಸಂದರ್ಭದಲ್ಲಿ ಬಾಲ ಪ್ರಹ್ಲಾದರನ್ನು ವೈಕುಂಠಕ್ಕೆ ಬರುವಂತೆ ಶ್ರೀಹರಿ ಕರೆದಾಗ ತನ್ನವರನ್ನೆಲ್ಲಾ ಜತೆಗೆ ಕರೆದೊಯ್ದರೆ ತಾನೂ ಬರುವುದಾಗಿ ಹೇಳುತ್ತಾರೆ. ನಸುನಕ್ಕ ನರಹರಿಯು ಮುಂದಿನ ದಿನಗಳಲ್ಲಿ ಅದು ಸಾಧ್ಯವಾಗಲಿದೆ ಎಂಬ ಅಭಯ ನೀಡುತ್ತಾನೆ.

ಶಂಖುಕರ್ಣ ಮತ್ತೆ ದ್ವಾಪರಯುಗದಲ್ಲಿ ಬಾಹ್ಲೀಕರಾಜನಾಗಿ ಅವತರಿಸಿ, ಶ್ರೀಕೃಷ್ಣದೇವರು ಹಾಗೂ ಭೀಮಸೇನರನ್ನು ಮೆಚ್ಚಿಸಿ ಅನುಗ್ರಹಿತರಾಗುತ್ತಾರೆ. ನಂತರ ಕಲಿಯುಗದಲ್ಲಿ ಶ್ರೀವ್ಯಾಸತೀರ್ಥರಾಗಿ ಅವತರಿಸಿ 732 ಪ್ರಾಣದೇವರ(ಹನುಮಂತ) ವಿಗ್ರಹ ಪ್ರತಿಷ್ಠಾಪಿಸುತ್ತಾರೆ‌. ನಂತರ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರಾಗಿ ಅವತರಿಸಿ ಲೋಕಕಲ್ಯಾಣ ನಡೆಸುತ್ತಿದ್ದಾರೆ.
ಅಂದು ಶ್ರೀಪ್ರಹ್ಲಾದರಾಜರಿಗೆ ನರಹರಿ ನೀಡಿದ್ದ ಅಭಯ ವಚನವನ್ನು ಇಂದು ನಿಜವಾಗಿಸುತ್ತಿದ್ದಾನೆ. ರಾಯರನ್ನು ಸೇವಿಸುವ ರಾಯರ ಮಂದಿಗೆ,ಸಕಲ ಸನ್ಮಂಗಳ ಕರುಣಿಸುವ ಮೂಲಕ ಕಲಿಯುಗದಲ್ಲಿ ಭುವಿಯಲ್ಲೇ ವೈಕುಂಠ ಸುಖವನ್ನು ಶ್ರೀಹರಿ ಕರುಣಿಸುತ್ತಿದ್ದಾನೆ.

ಇದಲ್ಲವೇ ರಾಯರ ಶಕ್ತಿ...!!!.

ಕಡು ಕರುಣಿ, ಪರಮ ಕರುಣಾಳು ಎಂಬ ಬಿರುದುಗಳ ಧಣಿ, ಅಗಣಿತ ಗುಣಗಳ ಗಣಿ, ಭಕ್ತರ ಪಾಲಿನ ದಿನಮಣಿ .
ಶ್ರೀರಾಘವೇಂದ್ರ ಗುರು ಸಾರ್ವಭೌಮರೆಂಬ ಹೆಸರಿನಿಂದ ಜಗತ್ತಿಗೆ ಚಿರಪರಿಚಿತರಾದ ಗುರುಗಳ ಆರಾಧನೆಯ ಪರ್ವಕಾಲದಲ್ಲಿ ಅವರನ್ನು ವಿಶೇಷವಾಗಿ ಸ್ಮರಿಸೋಣ. ಅವರ ಅನುಗ್ರಹವನ್ನು ನಮ್ಮಹೃದಯದಲ್ಲಿ ಧರಿಸೋಣ.

ದುರ್ವಾದಿಧ್ವಾಂತರವಯೇ ವೈಷ್ಣವೇಂದಿವರೇಂದವೆ ।
ಶ್ರೀರಾಘವೇಂದ್ರಗುರವೇ ನಮೋ ಅತ್ಯಂತ ದಯಾಲವೇ ।।

( ನಮ್ಮ ಸ್ವಗೃಹವಾದ ಶ್ರೀವೃಂದಾವನ ದಲ್ಲಿ ಯಥಾಶಕ್ತಿ ರಾಯರ ಮಧ್ಯಾರಾಧನೆ ಯನ್ನು ದಿನಾಂಕ: 21-08-2024 ರಂದು ಬುಧವಾರ ನಡೆಸಲಾಗುತ್ತಿದೆ. ಶ್ರೀರಾಘವೇಂದ್ರ ಗುರು ಸಾರ್ವಭೌಮರು, ಸನಿಹ ಒಂದು ಸಾವಿರದಷ್ಟು ಮಂದಿ ಅವರ ಭಕ್ತರಿಗೆ ತೀರ್ಥ, ಪ್ರಸಾದ ವಿನಿಯೋಗ ಮಾಡಿಸುತ್ತಿದ್ದಾರೆ.

ಸದ್ಭಕ್ತರಾದ ತಾವು, ಈ ಕಾರ್ಯದಲ್ಲಿ ಭಾಗವಹಿಸಿ, ತೀರ್ಥ ಪ್ರಸಾದ ಹಾಗೂ ಫಲ ಮಂತ್ರಾಕ್ಷತೆ ಸ್ವೀಕರಿಸಿ ರಾಯರ ಕೃಪೆಗೆ ಪಾತ್ರರಾಗುವಂತೆ ಕೋರುತ್ತೇನೆ. ಈ ಭಕ್ತರ ಸಂಖ್ಯೆಯನ್ನು ಅಗಣಿತಗೊಳಿಸಿ ಆರಾಧನೆಯನ್ನು ಮತ್ತಷ್ಟು ಸಂಭ್ರಮಗೊಳಿಸುವಂತೆ ರಾಯರ ಉಪಾಸ್ಯಮೂರ್ತಿ ಮುಖ್ಯಪ್ರಾಣಾಂತರ್ಗತ ಶ್ರೀಮನ್ಮೂಲರಾಮದೇವರಲ್ಲಿ ಶಿರಸಾ ಬೇಡುತ್ತೇನೆ.)

ಜೀಯಾ ನೀನಲ್ಲದೆ ಇನ್ನಾರು ಕಾಯ್ವರೋ.....🙏🙏🙏

ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.