ಮಣಿಪಾಲದ ಪ್ರತಿಷ್ಠಿತ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಸೆಪ್ಟೆಂಬರ್ 18, 2025 ರಂದು WGSHA ಕಾಲೇಜಿನ ಆವರಣದ ಬಳಿ ಈ ಘಟನೆ ನಡೆದಿದೆ. ಕಾಲೇಜಿನ ವಿದ್ಯಾರ್ಥಿಗಳಾದ ರಾಜ್ ಗಿರೀಶ ಮತ್ತು ಆತನ ಸ್ನೇಹಿತ ಸ್ವಾತಿಕ್ ಕೆ. ಅವರು ಮಧ್ಯಾಹ್ನ 12:00 ಗಂಟೆಗೆ ಊಟಕ್ಕಾಗಿ ಕಾಲೇಜಿನಿಂದ ಹೊರಗೆ ಹೋಗುತ್ತಿದ್ದರು.
ಈ ವೇಳೆ, ಇದೇ ಕಾಲೇಜಿನ ವಿದ್ಯಾರ್ಥಿಗಳಾದ ರಾಜ್‌ವೀರ್ ಸಿಂಗ್, ವಿಕ್ರಮ್ ವೀರ್ ಸಿಂಗ್ ಮತ್ತು ಎರಡನೇ ವರ್ಷದ ವಿದ್ಯಾರ್ಥಿ ಕ್ರಿಶ್ ಅವರು ಅವರನ್ನು ಅಡ್ಡಗಟ್ಟಿದ್ದಾರೆ. ಮೊದಲಿಗೆ, ರಾಜ್‌ವೀರ್ ಮತ್ತು ವಿಕ್ರಮ್ ಅವರು ರಾಜ್ ಗಿರೀಶಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಆತನ ಸ್ಕೂಟಿಯ ಕೀ (Scooty Key) ಎಳೆದು ದೌರ್ಜನ್ಯ ಎಸಗಿದ್ದಾರೆ.
ನಂತರ, ಮೂವರು ಆರೋಪಿಗಳು ಸ್ವಾತಿಕ್ ಅವರನ್ನು ಉದ್ದೇಶಪೂರ್ವಕವಾಗಿ ಕೊಲ್ಲುವ ಉದ್ದೇಶದಿಂದ ಹಲ್ಲೆ ನಡೆಸಿದ್ದಾರೆ. ದೂರಿನ ಪ್ರಕಾರ, ಅವರು ಸ್ವಾತಿಕ್ ಅವರ ಕೈ, ಕಾಲು ಮತ್ತು ಭುಜಕ್ಕೆ ಹಲ್ಲೆ ಮಾಡಿ ನೆಲಕ್ಕೆ ತಳ್ಳಿ ಕಾಲಿನಿಂದ ಒದ್ದಿದ್ದಾರೆ.
ಮೂವರು ಸೇರಿಕೊಂಡು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಸ್ವಾತಿಕ್ ಅವರ ಎಡ ಭುಜದ ಮೂಳೆ ಮುರಿದಿದ್ದು, ಕೈ ಎತ್ತಲಾಗದಷ್ಟು ಗಂಭೀರ ಸ್ಥಿತಿಯಲ್ಲಿದ್ದಾರೆ. ಗಾಯಗೊಂಡ ವಿದ್ಯಾರ್ಥಿಯ ಸ್ನೇಹಿತ ರಾಜ್ ಗಿರೀಶ ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಣಿಪಾಲ(Manipal) ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಸದ್ಯ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಘಟನೆ ಕಾಲೇಜು ಆವರಣದಲ್ಲಿ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
0 ಕಾಮೆಂಟ್‌ಗಳು