ಮಣಿಪಾಲದ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ (ಎಂಸಿಒಡಿಎಸ್) ವತಿಯಿಂದ ಆಗಸ್ಟ್ 20ರಂದು ಆಯೋಜಿಸಲಾದ ನಿಕಾನ್ ಡಿಎಸ್‌ಎಲ್‌ಆರ್ ಛಾಯಾಗ್ರಹಣ ಕಾರ್ಯಾಗಾರದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಹಿರಿಯ ಸುದ್ದಿ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.
ಕಾರ್ಯಾಗಾರದಲ್ಲಿ ಅವರು ಛಾಯಾಗ್ರಹಣದ ಮೂಲತತ್ವಗಳು, ಕ್ಯಾಮೆರಾ ನಿರ್ವಹಣೆ, ಬೆಳಕಿನ ಸಮರ್ಪಕ ಬಳಕೆ, ಪೋರ್ಟ್ರೇಟ್ ಹಾಗೂ ಮ್ಯಾಕ್ರೋ ಛಾಯಾಗ್ರಹಣ ತಂತ್ರಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ನೀಡಿದರು. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಾಮಕಾರಿ ಛಾಯಾಗ್ರಹಣದ ಮಹತ್ವವನ್ನು ವಿವರಿಸಿದ ಅವರು, ಉತ್ತಮ ಚಿತ್ರ ನಿರ್ಮಾಣದಲ್ಲಿ ತಾಂತ್ರಿಕ ಜ್ಞಾನದೊಂದಿಗೆ ಸೃಜನಶೀಲ ದೃಷ್ಟಿಕೋನವೂ ಅತ್ಯಗತ್ಯ ಎಂದು ತಿಳಿಸಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಆಸ್ಟ್ರೋ ಮೋಹನ್, ಛಾಯಾಗ್ರಹಣ ಕ್ಷೇತ್ರದಲ್ಲಿನ ತಮ್ಮ ಸುದೀರ್ಘ ಅನುಭವ ಮತ್ತು ಒಳನೋಟಗಳನ್ನು ಹಂಚಿಕೊಂಡರು. ಕಾರ್ಯಾಗಾರಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ನೀಡಿದ ಕೊಡುಗೆಯನ್ನು ಗುರುತಿಸಿ ಎಂಸಿಒಡಿಎಸ್ ವತಿಯಿಂದ ಆಸ್ಟ್ರೋ ಮೋಹನ್ ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.
ನಿಕಾನ್ ಸಂಸ್ಥೆಯ ಏರಿಯಾ ಸೇಲ್ಸ್ ಮ್ಯಾನೇಜರ್ ಮಹೇಶ್, ಸಿಬ್ಬಂದಿಗಳಾದ ರೋಷನ್ ಮತ್ತು ಶ್ರೀನಿವಾಸ್, ಕಾಲೇಜಿನ ಫ್ಯಾಕಲ್ಟಿ ಅಡ್ವೈಸರ್‌ಗಳಾದ ಡಾ. ವಿನೀತಾ ಮತ್ತು ಡಾ. ಲಕ್ಷ್ಮಿ ಹಾಗೂ ಮಿರಾಜ್ ಕ್ಲಬ್ ಮುಖ್ಯಸ್ಥೆ ಡಾ. ಮೇಧವಿ ವರ್ಮಾ ಉಪಸ್ಥಿತರಿದ್ದರು.
