HY :ಹಣ ಹಾಗೂ ಐಷಾರಾಮಿ ಜೀವನ ಶೈಲಿಗಾಗಿ ಶಾಲಾ ಪ್ರಾಂಶುಪಾಲೆ ಹಾಗೂ ನಿರ್ದೇಶಕಿ ಕಲ್ಲು ರೂಪಾ ರೆಡ್ಡಿ (48) ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಇಬ್ಬರು ವಿದ್ಯಾರ್ಥಿ ಗಳನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್ ನಲ್ಗೊಂಡ ಜಿಲ್ಲೆಯ ಕೊಂಡಮಲ್ಲೇಪಲ್ಲಿಯ ನಾಗಾರ್ಜುನ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಹಾಗೂ ನಿರ್ದೇಶಕಿಯಾಗಿದ್ದ ರೂಪಾ ರೆಡ್ಡಿ ಅವರು ಆ.12ರ ಬೆಳಿಗ್ಗೆ ತಮ್ಮ ನಿವಾಸದಲ್ಲಿ 27 ಇರಿತದ ಗಾಯಗಳೊಂದಿಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೈದರಾಬಾದ್‌ನಲ್ಲಿದ್ದ ಅವರ ಪತಿ, ರೂಪಾ ಅವರು ತಮ್ಮ ಫೋನ್ ಕರೆಗಳಿಗೆ ಪ್ರತಿಕ್ರಿಯಿ ಸುತ್ತಿಲ್ಲ ಎಂದು ನೆರೆಹೊರೆಯವರಿಗೆ ತಿಳಿಸಿದ್ದರು. ನೆರೆಹೊರೆ ಯವರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪೊಲೀಸರು ಮನೆಗೆ ತೆರಳಿದಾಗ ರೂಪಾ ರೆಡ್ಡಿ ಮೃತಪಟ್ಟಿರುವುದು ಪತ್ತೆ ಯಾಗಿತ್ತು.
ಪ್ರಕರಣದ ತನಿಖೆಗೆ ಪೊಲೀಸರು ಐದು ತಂಡಗಳನ್ನು ರಚಿಸಿದ್ದರು. CCTV ದೃಶ್ಯಾವಳಿಗಳು, ವಿಧಿವಿಜ್ಞಾನ ಸಾಕ್ಷ್ಯಗಳು, ಬೆರಳಚ್ಚುಗಳು, ತಾಂತ್ರಿಕ ದತ್ತಾಂಶ ಹಾಗೂ ಶಂಕಿತರ ಚಲನವಲನಗಳನ್ನು ಪರಿಶೀಲಿಸಲಾಯಿತು. 80ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸ ಲಾಯಿತು.
'ಬಾಬು' ಪದದಿಂದ ಸುಳಿವು : ರೂಪಾ ರೆಡ್ಡಿ ಅವರು ತಮ್ಮ ಚಿಕ್ಕಮ್ಮನೊಂದಿಗೆ ದೂರವಾಣಿಯಲ್ಲಿ ಮಾತನಾಡುವಾಗ 'ಬಾಬು' ಎಂಬ ಪದ ಬಳಸಿದ್ದ ವಿಚಾರ ತನಿಖಾಧಿಕಾರಿ ಗಳಿಗೆ ಪ್ರಮುಖ ಸುಳಿವು ನೀಡಿತು.
“ಆಕೆಯ ಸಂಭಾಷಣೆಯ ವೇಳೆ ದಾಖಲಾಗಿದ್ದ ಕೊನೆಯ ಪದ 'ಬಾಬು'. ಆಕೆ ಯಾರನ್ನು ಉಲ್ಲೇಖಿಸುತ್ತಿರಬಹುದು ಎಂಬುದರ ಕುರಿತು ತನಿಖೆ ನಡೆಸಿದಾಗ, ಅದು ನಮ್ಮನ್ನು ಶಾಲಾ ವಿದ್ಯಾರ್ಥಿಗಳ ಮೇಲೆ ಶಂಕೆ ಮೂಡಿತು” ಎಂದು ಹಿರಿಯ ಪೊಲೀಸ್ ಅಧಿಕಾರಿ ಶರತ್ ಚಂದ್ರ ಪವಾರ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಬಳಿಕ ಪೊಲೀಸರು ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು. ಶಾಲೆಗೆ ಗೈರು ಹಾಜರಾಗಿದ್ದ ಐವರು 10ನೇ ತರಗತಿ ವಿದ್ಯಾರ್ಥಿಗಳ ಮೇಲೆ ಗಮನ ಹರಿಸಿದರು. ಈ ಪೈಕಿ ಇಬ್ಬರು ಕಳೆದ ಕೆಲವು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಿದ್ದು, ಪಾರ್ಟಿಗಳನ್ನು ನಡೆಸುತ್ತಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿತು.
ಬುಧವಾರ ಬೆಳಿಗ್ಗೆ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಯಿತು. ವಿಚಾರಣೆ ವೇಳೆ ಯೋಜನೆ ಯಂತೆ ರೂಪಾ ರೆಡ್ಡಿ ಅವರನ್ನು ಕೊಲೆ ಮಾಡಿರುವುದಾಗಿ ಅವರು ಒಪ್ಪಿ ಕೊಂಡಿದ್ದಾರೆ ಎಂದು ಪವಾರ್ ತಿಳಿಸಿದರು.
ಹಾಸ್ಟೆಲ್‌ನಿಂದ ಡೇ-ಸ್ಕಾಲರ್ ಗಳಾಗಿದ್ದರು: ಆರೋಪಿಗಳ ಹಾಸ್ಟೆಲ್ ಬ್ಯಾಗ್‌ಗಳಲ್ಲಿ ನಗದು ಹಾಗೂ ಮೊಬೈಲ್ ಫೋನ್ ಪತ್ತೆಯಾದ ಹಿನ್ನೆಲೆಯಲ್ಲಿ ರೂಪಾ ರೆಡ್ಡಿ ಈ ಹಿಂದೆ ಅವರ ವಿರುದ್ದ ಕ್ರಮ ಕೈಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಷಯವನ್ನು ಅವರು ವಿದ್ಯಾರ್ಥಿಗಳ ಪೋಷಕರಿಗೆ ತಿಳಿಸಿದ್ದರು. ಬಳಿಕ ಇಬ್ಬ ರನ್ನೂ ಹಾಸ್ಟೆಲ್‌ನಿಂದ ಡೇ-ಸ್ಕಾಲರ್ ಗಳಾಗಿ ಸ್ಥಳಾಂತರಿಸಲಾಗಿತ್ತು. ಇದೇ ವಿಚಾ ರವು ಪ್ರಾಂಶು ಪಾಲೆಯ ವಿರುದ್ಧ ವಿದ್ಯಾರ್ಥಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿ ರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಐದು ದಿನಗಳ ಕಾಲ ಕೊಲೆಗೆ ಸಂಚು: ಆರೋಪಿಗಳು ಸುಮಾರು ಐದು ದಿನಗಳ ಕಾಲ ಕೊಲೆಯ ಯೋಜನೆ ರೂಪಿಸಿದ್ದರು. ರೂಪಾ ರೆಡ್ಡಿ ಅವರ ಮನೆಯನ್ನು ಪರಿ ಶೀಲಿಸಿದ್ದ ಅವರು ಚಾಕುವೊಂದನ್ನು ಖರೀದಿಸಿದ್ದರು. ತಮ್ಮ ಗುರುತು ಪತ್ತೆಯಾಗ ದಂತೆ ಕೈಗವಸುಗಳನ್ನೂ ಖರೀದಿಸಿದ್ದರು. ಇದರಿಂದ ಆರಂಭಿಕ ತನಿಖೆಯಲ್ಲಿ ಪೊಲೀಸರಿಗೆ ಹೆಚ್ಚಿನ ಭೌತಿಕ ಸಾಕ್ಷ್ಯಗಳು ಸಿಕ್ಕಿರಲಿಲ್ಲ.
ಕೊಲೆಯ ದಿನ ವಿದ್ಯಾರ್ಥಿಗಳಲ್ಲಿ ಒಬ್ಬನು ಮಂಕಿ ಕ್ಯಾಪ್ ಹಾಗೂ ಕೈಗವಸು ಧರಿಸಿ ರೂಪಾ ರೆಡ್ಡಿ ಅವರ ಮನೆಗೆ ಪ್ರವೇಶಿಸಿದ್ದ. ಮಲಗುವ ಕೋಣೆಯಲ್ಲಿ ಇರಿಸಿದ್ದ 2.50 ಲಕ್ಷ ರೂ. ಹಣವನ್ನು ಕಂಡು ಅದನ್ನು ತೆಗೆದುಕೊಂಡು ಪರಾರಿಯಾಗಲು ಮುಂದಾ ಗಿದ್ದ. ಈ ವೇಳೆ ಮಂಕಿ ಕ್ಯಾಪ್ ಜಾರಿದ್ದರಿಂದ ರೂಪಾ ರೆಡ್ಡಿ ಆತನನ್ನು ಗುರುತಿಸಿದ್ದರು. ತಾನು ಗುರುತಿ ಸಲ್ಪಟ್ಟಿದ್ದೇನೆ ಎಂಬ ಭಯದಿಂದ ಆರೋಪಿ ಚಾಕುವಿನಿಂದ ರೂಪಾ ರೆಡ್ಡಿ ಅವರಿಗೆ 27 ಬಾರಿ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯ ಬಳಿಕ ಆರೋಪಿಗಳು ಹಣವನ್ನು ತೆಗೆದುಕೊಂಡು, ರಕ್ತದ ಕಲೆಗಳಿದ್ದ ಬಟ್ಟೆ ಹಾಗೂ ಮಂಕಿ ಕ್ಯಾಪ್ ಅನ್ನು ಹೂತುಹಾಕುವ ಮೂಲಕ ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸಿದ್ದರು. ಬಳಿಕ ಅವರು ಗೋವಾಕ್ಕೆ ಪ್ರವಾಸ ತೆರಳಿದ್ದರು ಎಂದು ವರದಿಯಾಗಿದೆ.
1.54 ಲಕ್ಷ ರೂ. ಮೌಲ್ಯದ ವಸ್ತು ವಶ: ಆರೋಪಿಗಳಿಂದ ರಕ್ತದ ಕಲೆಗಳಿದ್ದ ಕೆಲವು ಕರೆನ್ಸಿ ನೋಟುಗಳು, ಅವರು ಖರೀದಿಸಿದ್ದ iPhone ಹಾಗೂ ರೂಪಾ ರೆಡ್ಡಿ ಅವರ ಮೊಬೈಲ್ ಫೋನ್ ಸೇರಿದಂತೆ ಒಟ್ಟು 1.54 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ.
ಕೊಲೆ ಯೋಜನೆಯನ್ನು ಕಾರ್ಯಗತಗೊಳಿಸುವ ಮುನ್ನ ಇಬ್ಬರು ಆರೋಪಿಗಳು ತ್ವರಿತವಾಗಿ ಹಣ ಗಳಿಸುವ ಮಾರ್ಗಗಳ ಕುರಿತು ಆನ್‌ಲೈನ್ ನಲ್ಲಿ ಹುಡುಕಾಟ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀ ಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
