ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಕಡಿಯಾಳಿ ವತಿಯಿಂದ ಆಯೋಜಿಸಿರುವ 60ನೇ ವರ್ಷದ ಶ್ರೀಗಣೇಶೋತ್ಸವ ವಜ್ರಮಹೋತ್ಸವದ ಅಂಗವಾಗಿ ಸಂಕಷ್ಟ ಹರ ಗಣಪತಿಯ ಅದ್ಧೂರಿ ಮೆರವಣಿಗೆ ಭಾನುವಾರ ನಡೆಯಿತು.
ಉಡುಪಿಯ ಜೋಡುಕಟ್ಟೆಯಿಂದ ಕಡಿಯಾಳಿಯ ಶ್ರೀ ಕಾತ್ಯಾಯನೀ ಮಂಟಪದವರೆಗೆ ನಡೆದ ಭವ್ಯ ಮೆರವಣಿಗೆಯಲ್ಲಿ ಗಣಪತಿ ಮೂರ್ತಿಯನ್ನು ಬರಮಾಡಿಕೊಳ್ಳಲಾಯಿತು. ಮೆರವಣಿಗೆಯಲ್ಲಿ ನೂರಾರು ಭಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಡಾ. ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್ ಅವರು ಗಣ್ಯರ ಸಮ್ಮುಖದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಡಿಯಾಳಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೇ ಸಮಾಜದ ನೋವಿಗೆ ಸ್ಪಂದಿಸುವ ಹಾಗೂ ಅವಕಾಶ ವಂಚಿತರಿಗೆ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಕಾರ್ಯ ಮಾಡುತ್ತಿದೆ. ಬೆಳಕಿಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಸೇರಿದಂತೆ ಆಸರೆ ಟ್ರಸ್ಟ್ ಮೂಲಕ ಹತ್ತಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. 60ನೇ ವರ್ಷದ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿರುವುದು ಸಂತಸದ ವಿಚಾರ. ಸಮಿತಿಯ ಸಮಾಜಮುಖಿ ಕಾರ್ಯಗಳು ಇನ್ನಷ್ಟು ವರ್ಷ ಮುಂದುವರಿಯಲಿ ಎಂದು ಹಾರೈಸಿದರು.
ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಮಾತನಾಡಿ, ಈ ಬಾರಿ ಮುದ್ದಣ ಪುರಾಣದ ಪ್ರಕಾರ 60ನೇ ರೂಪದ ವಿಶೇಷವಾಗಿ ಸಂಕಷ್ಟ ಹರ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. 7 ಅಡಿ 9 ಇಂಚು ಎತ್ತರದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ರಾಷ್ಟ್ರದ ಸಂಕಷ್ಟಗಳೆಲ್ಲ ಪರಿಹಾರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗುವುದು. ಗಣಪತಿಗೆ ಚಿನ್ನದ ಕಿರೀಟ, ಚಿನ್ನದ ಚಕ್ರಸಾರ ಸೇರಿದಂತೆ ವಿವಿಧ ಆಭರಣಗಳನ್ನು ತೊಡಿಸಲಾಗುವುದು ಎಂದರು.
ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ, ಶಾಸಕ ಯಶಪಾಲ್ ಎ. ಸುವರ್ಣ, ಕೋಶಾಧಿಕಾರಿ ಎಂ. ವಲ್ಲಭ್ ಭಟ್, ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ಡಾ. ರವಿರಾಜ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಗಿರೀಶ್ ಎಂ. ಅಂಚನ್, ಕೋಶಾಧಿಕಾರಿ ಕೆ. ಮಂಜುನಾಥ್ ಹೆಬ್ಬಾರ್, ಮೆರವಣಿಗೆ ಸಮಿತಿ ಸದಸ್ಯರಾದ ದಿನೇಶ್ ಅಮೀನ್, ಮೋಹನ್ ಉಪಾಧ್ಯಾಯ, ಕಿಶೋರ್ ಸಾಲಿಯಾನ್, ನಾಗರಾಜ್ ಶೆಟ್ಟಿ, ಭಾರತಿ ಚಂದ್ರಶೇಖರ್, ಸಂಧ್ಯಾ ರಮೇಶ್, ರಜನಿ ಹೆಬ್ಬಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
