ಉಡುಪಿಯ ರಾಧಾಕೃಷ್ಣ ನೃತ್ಯ ನಿಕೇತನದ ಸಂಸ್ಥಾಪಕರಾದ ಕೀರ್ತಿಶೇಷ ರಾಧಾಕೃಷ್ಣ ತಂತ್ರಿಯವರ 91 ನೇ ಹುಟ್ಟುಹಬ್ಬ ಸಂಸ್ಕರಣೆ “ಗುರು ನಮನ” ಇತ್ತೀಚೆಗೆ ಉಡುಪಿಯ IYC ಯಕ್ಷಗಾನ ಕಲಾರಂಗ ಹಾಲ್‌ನಲ್ಲಿ ನಡೆಯಿತು.
ಅಂದಿನ ಕಾರ್ಯಕ್ರಮವನ್ನು ಸುರತ್ಕಲ್ಲಿನ ನಾಟ್ಯಂಜಲಿ ಕಲಾ ಅಕಾಡೆಮಿಯ ನಿರ್ದೇಶಕರಾದ ಕರ್ನಾಟಕ ಕಲಾಶ್ರೀ ಶ್ರೀ ಕೆ. ಚಂದ್ರಶೇಖರ ನಾವಡ ಉದ್ಘಾಟಿಸಿದರು.
ಅತಿಥಿಗಳಾಗಿ ಬೆಂಗಳೂರಿನ ನವರಸಧಾಮ ನೃತ್ಯ ಶಾಲೆಯ ವಿದುಷಿ ಸುಷ್ಮಾ ಕಾಮತ್ ಆಗಮಿಸಿದ್ದರು.
ಸಭಾ ಕಾರ್ಯಕ್ರಮದ ನಂತರ ರಾಧಾಕೃಷ್ಣ ನೃತ್ಯ ನಿಕೇತನದ 40 ಊರ ಪರವೂರ ಶಿಷ್ಯರಿಂದ ಗುರುಗಳಿಗೆ “ನೃತ್ಯಾಭಿಷೇಕಂ” ನೃತ್ಯದ ಮೂಲಕ ಗುರು ನಮನ ಸಲ್ಲಿಸಲಾಯಿತು.
ಪ್ರಪ್ರಥಮ ಬಾರಿಗೆ ರಾಧಾಕೃಷ್ಣ ನೃತ್ಯ ನಿಕೇತನವು ನೃತ್ಯ ಕಾರ್ಯಕ್ರಮಕ್ಕೆ ಧ್ವನಿ ಮುದ್ರಣ ಬಳಸಿಕೊಂಡಿತ್ತು.
ಕಾರ್ಯಕ್ರಮದ ಮೊದಲನೆಯದಾಗಿ ಮಧುರೈ ಆರ್. ಮುರುಳೀಧರನ್ ಅವರ ಸರಸ್ವತಿ ರಾಗದ ಪುಷ್ಪಾಂಜಲಿ ಸುಂದರವಾಗಿ ಮೂಡಿ ಬಂದಿತು.
ನಂತರ ಗಣಪತಿ ಕವಿತ್ವಂ ಮೂಲಕ ಗಣೇಶ ಸ್ತುತಿಯನ್ನು ಕಲಾವಿದರು ನರ್ತಿಸಿದರು.
ರಾಧಾಕೃಷ್ಣ ನೃತ್ಯ ನಿಕೇತನದ ನೃತ್ಯ ನಿರ್ದೇಶಕಿ ವಿದುಷಿ ಶ್ರೀಮತಿ ವೀಣಾ ಎಂ. ಸಾಮಗ ಯಾವಾಗಲೂ ಹಿಮ್ಮೇಳದಲ್ಲಿ ಕುಳಿತು ಹಾಡುಗಾರಿಕೆ ನಟುವಾಂಗ ಮಾಡುವವರು, ತಮ್ಮ 52ನೇ ವಯಸ್ಸಿನಲ್ಲಿ ಪುರಂದರದಾಸರ ರಚಿತ ಕಾಪಿ ರಾಗದ ಆದಿ ತಾಳದ ಜಗದೋದ್ಧಾರನ ಆಡಿಸಿದಳು ಯಶೋದೆಗೆ ಅಮೋಘವಾದ ಅಭಿನಯವನ್ನು ವೇದಿಕೆಯಲ್ಲಿ ನೀಡಿ ಜನ ಮನ ಗೆದ್ದರು.
ನಂತರ ಕೃತಿ ದುರ್ಗೆ ದುರ್ಗೆ ಜಯ ಜಯ ದುರ್ಗೆ ರೇವತಿ ರಾಗ, ಮಧುರೈ ಕೃಷ್ಣನ್ ರಚನೆಯಲ್ಲಿ ಕಲಾವಿದರು ದೇವಿಯ ವರ್ಣನೆಯನ್ನು ಅಭಿನಯಿಸಿ ಸುಂದರವಾಗಿ ಪ್ರಸ್ತುತಿ ನೀಡಿದರು.
ಶಿವ ಸ್ತುತಿ – ಶಂಭೋ ಶಂಕರ ಶಿವ ದಲ್ಲಿ ಚಾರಿ, ಕರಣಗಳ ಸಂಯೋಜನೆ ನೃತ್ಯಕ್ಕೆ ಮೆರುಗು ನೀಡಿತು.
ತುಳಸಿದಾಸರ ಶ್ರೀ ರಾಮಚಂದ್ರ ಕೃಪಾಳು ಭಜಮನದಲ್ಲಿ ಅಹಲ್ಯ ಶಾಪ ವಿಮೋಚನೆ, ಸೀತಾ ವಿವಾಹ, ಭರತನ ಭ್ರಾತೃ ಪ್ರೇಮ, ರಾಮ ರಾವಣ ಯುದ್ಧ, LED ಯ AI Technology ಯೊಂದಿಗೆ ಸಹಜವಾದ ನೈತಿಕತೆಯ ರಾಮಾಯಣ ದೃಶ್ಯ ಜನರ ಮನ ಸೂರೆಗೊಂಡಿತು ಅಲ್ಲದೆ ವಿದುಷಿ ವೀಣಾ. ಎಂ. ಸಾಮಗರ ಶಬರಿ ಅಭಿನಯ ಹಾಗು ಅವರ ಮಗ ಬಿ. ಎಂ. ಪವನ್ ರಾಜ್ ಸಾಮಗರ ರಾಮ ಅಭಿನಯ ಎಲ್ಲಾ ಪ್ರೇಕ್ಷಕರ ಮನ ಮುಟ್ಟುವಂತೆ ಅಮೋಘವಾಗಿ ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ಬರುವಂತೆ ಮಾಡಿತು.
ನಂತರದಲ್ಲಿ ಸಂಗೀತದ ಮೇರು ಕೃತಿಯಾದ ರಾಗಂ ತಾನಂ ಪಲ್ಲವಿಗೆ ವಿದುಷಿ ವೀಣಾ ಸಾಮಗರ ನೃತ್ಯ ಸಂಯೋಜನೆಯಲ್ಲಿ ಒಮ್ಮೆ ಇಡೀ ಉಡುಪಿ ಕ್ಷೇತ್ರದ ಚರಿತ್ರೆಯು ಹಾಗೂ ಶ್ರೀ ಕೃಷ್ಣ ಲೀಲೋತ್ಸವದ ತುಣುಕು ಎಲ್ಲರಿಗೂ ಹರ್ಷಾನಂದ ತಂದಿತು.
ನಂತರ ಕಾರ್ಯಕ್ರಮದ ಕೊನೆಯಲ್ಲಿ ಶಿವ ರಂಜನಿ ರಾಗದ ತಿಲ್ಲಾನ ಪ್ರಸ್ತುತ ಪಡಿಸಲಾಯಿತು. ಒಟ್ಟಾರೆ ಉಡುಪಿಯ ರಾಧಾಕೃಷ್ಣ ನೃತ್ಯ ನಿಕೇತನದ ಗುರುನಮನದಲ್ಲಿ ನೃತ್ಯಾಭಿಷೇಕಂ ಎಲ್ಲರ ಗಮನ ಸೆಳೆಯಿತು.
