ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಪ್ರಸಿದ್ಧ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿಯವರು ತಮ್ಮ ಧಾರ್ಮಿಕ ಪ್ರವಾಸದ ನಿಮಿತ್ತ ತವರಿಗೆ ಆಗಮಿಸಿ ಉಡುಪಿ ಮಂಗಳೂರಿನ ಅನೇಕ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಕುಕ್ಕೆ ಕ್ಷೇತ್ರದಲ್ಲಿ ಶ್ರೀಸುಬ್ರಮಣ್ಯದೇವರ ದರ್ಶನ ಹಾಗೂ ಸಂಪುಟ ಶ್ರೀನರಸಿಂಹ ಸ್ವಾಮಿಯ ದರ್ಶನ ಸ್ವೀಕರಿಸಿ ಶ್ರೀಸುಬ್ರಮಣ್ಯಮಠದ ಶ್ರೀವಿದ್ಯಾಪ್ರಸನ್ನತೀರ್ಥ ಶ್ರೀಪಾದರಿಂದ ಆಶೀರ್ವಾದ ಪಡೆದು ಕೊಲ್ಲೂರಿನ ಮೂಕಾಂಬಿಕೆಯ ದರ್ಶನ ಪೂರೈಸಿದರು.ರಾತ್ರಿ ಉಡುಪಿಗೆ ಆಗಮಿಸಿ ಶ್ರೀಕೃಷ್ಣಮುಖ್ಯಪ್ರಾಣದೇವರ ದರ್ಶನ ಪಡೆದ ನಂತರ ಪರ್ಯಾಯ ಶ್ರೀಶಿರೂರುಮಠದ ಶ್ರೀವೇದವರ್ಧನತೀರ್ಥ ಶ್ರೀಪಾದರಿಂದ ಶಾಸ್ತ್ರಿಯವರಿಗೆ ಫಲ ಮಂತ್ರಾಕ್ಷತೆ ಸಹಿತವಾಗಿ ಮಧ್ವಪೀಠದಲ್ಲಿ ವಿಶೇಷ ಅಭಿನಂದನೆ ನೆರವೇರಿತು.
ಗುರುವಾರ ಮುಂಜಾನೆ ಪಾವಂಜೆ ಶ್ರೀಸುಬ್ರಮಣ್ಯ ದೇವರ ದರ್ಶನ ಪೂರೈಸಿ ಕರ್ವಾಲಿನಲ್ಲಿರುವ ಶ್ರೀವಿಷ್ಣುಮೂರ್ತಿ ದೇವರಿಗೆ ಮತ್ತು ಕುಟುಂಬದ ಮೂಲ ನಾಗದೇವರ ಸನ್ನಿಧಾನಕ್ಕೆ ಪಂಚಾಮೃತ ಸಹಿತ ವಿಶೇಷ ಪೂಜೆ ಸಲ್ಲಿಸಿದರು.ಕರ್ವಾಲು ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ರವಿಶಾಸ್ತ್ರಿಯವರಿಗೆ ವಿಶೇಷ ಅಭಿನಂದನೆ ನೆರವೇರಿತು.
ಈ ಶುಭ ಸಂದರ್ಭದಲ್ಲಿ ರವಿಶಾಸ್ತ್ರಿಯವರ ಕುಟುಂಬಿಕರಾದ ಶ್ರೀಸಂತೋಷ ಶಾಸ್ತ್ರಿ,ಶ್ರೀಮತಿ ಕವಿತಾ ಶಾಸ್ತ್ರಿ ಆಪ್ತರಾದ ಶ್ರೀವಾದಿರಾಜ ಪೆಜತ್ತಾಯ,ಶ್ರೀಲಾತವ್ಯ ಆಚಾರ್ಯ,ಶ್ರೀಅಶ್ವಿನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
