ಸುರತ್ಕಲ್-ನಂತೂರು ಜಂಕ್ಷನ್‌ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗಮಿತಿ ನಿಗದಿ!

ಕರಾವಳಿಯಲ್ಲಿ ಮಳೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಸುರತ್ಕಲ್-ನಂತೂರು ಜಂಕ್ಷನ್‌ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗಮಿತಿಯನ್ನು 50 ಕಿ.ಮೀ/ಗಂಟೆಗೆ ನಿಗದಿಪಡಿಸಲಾಗಿದೆ.

ಈ ಮಿತಿ ಸೆಪ್ಟಂಬರ್‌ ಅಂತ್ಯದ ವರೆಗೆ ಚಾಲ್ತಿಯಲ್ಲಿ ಇರಲಿದೆ.ಅತಿವೃಷ್ಟಿಯಿಂದಾಗಿ ರಾ.ಹೆದ್ದಾರಿಯ ಹಲವು ಭಾಗಗಳು ಕೆಟ್ಟು ಹೋಗಿವೆ, ಹಾಗಾಗಿ ಅಂತಹ ಭಾಗಗಳು ಅತಿವೇಗದ ಚಾಲನೆಗೆ ಅಸುರಕ್ಷಿತವಾಗಿವೆ. ಹೆದ್ದಾರಿಬಳಕೆದಾರರ ಸುರಕ್ಷತೆಯನ್ನು ದೃಷ್ಟಿಯಲ್ಲಿರಿಸಿ ರಾಷ್ಟ್ರೀಯ ಹೆದ್ದಾರಿ (ಭೂಮಿ ಹಾಗೂ ಸಂಚಾರ) 2002 ರ ಅಡಿಯಲ್ಲಿ ಇರುವ ಅಧಿಕಾರವನ್ನು ಬಳಕೆ ಮಾಡಿ, ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳು ಸಾಧ್ಯವಾದಷ್ಟೂ ಎಲ್ಲೆಲ್ಲಿ ಸರ್ವಿಸ್‌ ರಸ್ತೆಗಳಿವೆಯೋ ಅಲ್ಲಿ ಅದನ್ನು ಬಳಕೆ ಮಾಡುವಂತೆ ರಾ.ಹೆ ಪ್ರಾಧಿಕಾರ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.

ಸದ್ಯ ಹೆದ್ದಾರಿ ಕೆಟ್ಟುಹೋಗಿರುವುದರಿಂದ ಘನವಾಹನಗಳು, ಲಘುವಾಹನ, ದ್ವಿಚಕ್ರ, ತ್ರಿಚಕ್ರ ವಾಹನಗಳೆಲ್ಲವೂ ಹೆದ್ದಾರಿಯನ್ನೇ ಬಳಸುವುದರಿಂದ ಕೆಲವೊಮ್ಮೆ ವಾಹನಗಳು ಹೊಂಡ ತಪ್ಪಿಸಲು ಅಡ್ಡಾದಿಡ್ಡಿಸಂಚರಿಸುವುದು ಅಪಘಾತಕ್ಕೆ ಕಾರಣವಾಗಬಹುದು. ಈ ಕಾರಣಕ್ಕೆ ಎಲ್ಲೆಲ್ಲಿ ಸರ್ವಿಸ್‌ ರಸ್ತೆ ಇದೆಯೋ(ಪಣಂಬೂರು, ಸುರತ್ಕಲ್‌, ಬೈಕಂಪಾಡಿ ಭಾಗಗಳು) ಅಲ್ಲಿ ದ್ವಿಚಕ್ರವಾಹನಗಳು ಸಂಚರಿಸಿದರೆ ಸಂಚಾರ ಸುಗಮವಾಗಬಹುದು ಎನ್ನುವ ಉದ್ದೇಶದಿಂದ ಈ ಪ್ರಕಟನೆ ನೀಡಲಾಗಿದೆ ಎಂದು ಯೋಜನಾ ನಿರ್ದೇಶಕ ಅಬ್ದುಲ್ಲ ಜಾವೇದ್‌ ಅಜ್ಮಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು