ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ ಅಂಗಸಂಸ್ಥೆ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು (ಎಂಐಟಿ), ಪ್ರತಿಷ್ಠಿತ ಸಿಎಫ್‌ಎ ಇನ್‌ಸ್ಟಿಟ್ಯೂಟ್ ವಿಶ್ವವಿದ್ಯಾಲಯ ಅಫಿಲಿಯೇಷನ್ ಕಾರ್ಯಕ್ರಮ (ಯುಎಪಿ) ಸರಣಿಗೆ ಸೇರಿದ ಭಾರತದ ಮೊದಲ ಮತ್ತು ಏಕೈಕ ಎಂಜಿನಿಯರಿಂಗ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಜಾಗತಿಕ ಮಟ್ಟದಲ್ಲಿ ಹಣಕಾಸು ಮತ್ತು ಹೂಡಿಕೆ ಕ್ಷೇತ್ರದಲ್ಲಿ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಸಿಎಫ್‌ಎ ಇನ್‌ಸ್ಟಿಟ್ಯೂಟ್‌ನೊಂದಿಗೆ ಕೈಜೋಡಿಸಿರುವುದು ಎಂಐಟಿಯ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಎಂಜಿನಿಯರಿಂಗ್ ಶಿಕ್ಷಣದ ಜತೆಗೆ ಹಣಕಾಸು ಕ್ಷೇತ್ರದ ಜಾಗತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಸಾಧನೆಯು ಅತ್ಯಂತ ಮಹತ್ವದ್ದಾಗಿದೆ.
ಎಂಐಟಿಯ 2023ರಿಂದ ಬಿ.ಟೆಕ್ (ಕಂಪ್ಯೂಟರ್ ಸೈನ್ಸ್ ಮತ್ತು ಫೈನಾನ್ಶಿಯಲ್ ಟೆಕ್ನಾಲಜಿ) ಎಂಬ ವಿನುತನ ಕೋರ್ಸ್ ಅನ್ನು ಆರಂಭಿಸಿದೆ. ಕಂಪ್ಯೂಟರ್ ಸೈನ್ಸ್ ಜತೆಗೆ ಹಣಕಾಸು, ಅನಲಿಟಿಕ್ಸ್, ತಂತ್ರಜ್ಞಾನಗಳನ್ನು ಒಳಗೊಂಡ ಅಂತರಶಿಸ್ತೀಯ ಕೋರ್ಸ್ ಪರಿಚಯಿಸಿದ ದೇಶದ ಮೊದಲ ಮತ್ತು ಏಕೈಕ ಸಂಸ್ಥೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಇಂದಿನ ಆಧುನಿಕ ಉದ್ಯೋಗ ಮಾರುಕಟ್ಟೆಗೆ ಪೂರಕವಾದ ಪರಿಣಿತರನ್ನು ಸಿದ್ಧಪಡಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತಿದೆ.
ಮೇ 6 ರಂದು ಮಣಿಪಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಿಎಫ್‌ಎ ಇನ್‌ಸ್ಟಿಟ್ಯೂಟ್‌ನ ಪ್ರತಿನಿಧಿಗಳಾದ ಸೈಮ್ ಫಕಿಹ್ ಮತ್ತು ಕುಮಾರಿ ಅಂಜನಾ ನಹರ್ ಅವರು ಮಾಹೆಯ ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ ಅವರಿಗೆ ವಿಶ್ವವಿದ್ಯಾಲಯದ ಈ ಹೊಸ ಮಾನ್ಯತೆಯ ಸ್ಮರಣ ಫಲಕವನ್ನು ಅಧಿಕೃತವಾಗಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಣಿಪಾಲದ ಎಂಐಟಿ ನಿರ್ದೇಶಕ ಕಮಾಂಡರ್ (ಡಾ) ಅನಿಲ್ ರಾಣಾ, ಡಾ. ಕುಂಚಂ ಶ್ಯಾಮ್ ಪ್ರಸಾದ್, ಎಂಐಟಿ ಸ್ಕೂಲ್ ಆಫ್ ಬೇಸಿಕ್ ಸೈನ್ಸಸ್, ಹ್ಯುಮಾನಿಟೀಸ್ ಅಂಡ್ ಮ್ಯಾನೇಜ್‌ಮೆಂಟ್‌ನ ಸಹ ಡೀನ್ ಡಾ. ಯೋಗೇಶ್ ಪೈ ಪಿ ಹಾಗೂ ಇದೇ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಈ ಮಾನ್ಯತೆಯಿಂದಾಗಿ ವಿದ್ಯಾರ್ಥಿಗಳಿಗೆ ಹಣಕಾಸು ತಂತ್ರಜ್ಞಾನದ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಶಿಕ್ಷಣ ದೊರೆಯಲಿದೆ. ಸಿಎಫ್‌ಎ ಇನ್‌ಸ್ಟಿಟ್ಯೂಟ್‌ನ ಈ ಮಾನ್ಯತೆಯು ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಅಧ್ಯಯನ ಸಾಮಗ್ರಿಗಳನ್ನು ಒದಗಿಸುವುದಲ್ಲದೆ, ಉದ್ಯಮದ ತಜ್ಞರೊಂದಿಗೆ ಸಂಪರ್ಕ ಸಾಧಿಸಲು ಮತ್ತು ವಿವಿಧ ವಿದ್ಯಾರ್ಥಿವೇತನಗಳನ್ನು ಪಡೆಯಲು ದಾರಿಯಾಗಿದೆ.

0 ಕಾಮೆಂಟ್‌ಗಳು